ವಿಂಧ್ಯಪರ್ವತ ಶ್ರೇಣಿ
 	ಭಾರತದ ಮೂರು ಮುಖ್ಯ ಪರ್ವತಶ್ರೇಣಿ ಗಳಲ್ಲಿ ಒಂದು. ಸಾತ್ಪುರ ಮತ್ತು ಅರಾವಳಿ ಉಳಿದೆರಡು ಪರ್ವತಶ್ರೇಣಿಗಳು. ಪ್ರಾಚೀನ ಕಾಲದಲ್ಲುಂಟಾದ ಭೂ ರಚನಾಕ್ರಮದಿಂದ ಮಡಿಕೆಮಡಿಕೆಯ ರೂಪದಲ್ಲಿ ನಿರ್ಮಾಣಗೊಂಡ ಈ ಪರ್ವತಗಳು ಅವಿರತ ನಗ್ನೀಕರಣ ಕ್ರಿಯೆಗೆ ಒಳಪಟ್ಟು ಸವೆದು ಸಣ್ಣಗುಡ್ಡ ಬೆಟ್ಟಗಳಂತೆ ಕಂಡುಬರುವುದರಿಂದ ಅವಶೇಷ ಪರ್ವತಗಳೆಂದೂ ಕರೆಯಲಾಗುತ್ತದೆ. ಈ ಮೂರು ಪರ್ವತ ಶ್ರೇಣಿಗಳಲ್ಲಿ ವಿಂಧ್ಯ ಪರ್ವತಶ್ರೇಣಿ ದೊಡ್ಡದಾದದ್ದು. ವಿಂಧ್ಯ ಪರ್ವತಗಳು ಪೂರ್ವ ಪಶ್ಚಿಮವಾಗಿ ನರ್ಮದಾ ಮತ್ತು ಕೋಸಿ ನದಿಯ ಸೀಳು ಕಣಿವೆಯ ಉತ್ತರದಂಚಿನಲ್ಲಿ ಹಬ್ಬಿವೆ. ಇವು ಸಮುದ್ರಮಟ್ಟದಿಂದ  450 ಮೀ ನಿಂದ 1100 ಮೀ ಎತ್ತರವಾಗಿವೆ. ಗುಜರಾತ್ ರಾಜ್ಯದಿಂದ ಮಧ್ಯಪ್ರದೇಶದ ಮೂಲಕ ಪೂರ್ವಕ್ಕೆ ವಾರಾಣಸಿವರೆಗೆ ಸು. 1086 ಕಿಮೀ ವರೆಗೆ ಹಬ್ಬಿದೆ. ಪರ್ವತಗಳ ಉತ್ತರಕ್ಕೆ ಮಾಳ್ವ ಪ್ರಸ್ಥಭೂಮಿ, ದಕ್ಷಿಣಕ್ಕೆ ಸಾತ್ಪುರ ಪರ್ವತ ಶ್ರೇಣಿಗಳು, ಪೂರ್ವಕ್ಕೆ ಬುಂದೇಲ್‍ಖಂಡ ಪ್ರದೇಶ ಮತ್ತು ಪಶ್ಚಿಮಕ್ಕೆ ಗುಜರಾತ್ ಬಯಲಿನಿಂದ ಸುತ್ತುವರಿಯಲ್ಪಟ್ಟಿದೆ. ಸಾತ್ಪುರ ಪರ್ವತಗಳು ವಿಂಧ್ಯ ಪರ್ವತಗಳಿಗೆ ಸಮಾನಾಂತರವಾಗಿ ಹರಡಿದ್ದು, ತಪತಿ ಮತ್ತು ನರ್ಮದಾ ನದಿಗಳ ಮಧ್ಯ ಭಾಗದಲ್ಲಿದೆ.

	ನರ್ಮದಾ ಈ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಮುಖ್ಯ ನದಿಯಾಗಿದ್ದು, ಜಬ್ಬಲ್‍ಪುರದ ಬಳಿ ಅಮೃತಶಿಲೆಯ ಕಮರಿಗಳಲ್ಲಿ ಪಶ್ಚಿಮ ಮುಖವಾಗಿ ಹರಿಯುತ್ತದೆ.

	ನಿರಂತರ ಭೂಸವೆತ ಮತ್ತು ಚಲನೆಯಿಂದ ಉಂಟಾದ ಕಡಪ್ಪ ಶಿಲಾ ರಚನೆ ವಿಂಧ್ಯ ಪರ್ವತದ ಮುಖ್ಯ ಭೂಭಾಗವಾಗಿದೆ. ಈ ಪರ್ವತದ ಉತ್ತರಭಾಗ ಅನೇಕ ಬೆಲೆ ಬಾಳುವ ಶಿಲೆಗಳಿಂದ ಮುಖ್ಯವಾಗಿ ವಜ್ರ, ಸುಣ್ಣಕಲ್ಲು ಹಾಗೂ ಗೃಹಬಳಕೆಯ ಕಲ್ಲುಗಳಿಂದ ಕೂಡಿದೆ, ಗಣಿಗಾರಿಕೆ ಇಲ್ಲಿ ಮುಖ್ಯಕೈಗಾರಿಕೆ. ಇಲ್ಲಿ ಕ್ವಾಟ್ರ್ಜ್, ಡಾಲಮೈಟ್ ಮತ್ತು ಬೆಸಾಲ್ಟ್ ಖನಿಜಗಳು 500-800ಮೀಟರ್ ದಪ್ಪವಾಗಿದ್ದು, ಅದರ 50-100ಮೀಟರ್ ಮೇಲಿನ ಸ್ಥರದಲ್ಲೆ ಡಾಲಮೈಟ್ ಶಿಲಾಪದರುಗಳು ಕಂಡುಬರುತ್ತವೆ.

	ನರ್ಮದಾ ನದಿಕಣಿವೆಯ ಮುಖ ಭಾಗ, ಉಬ್ಬಿದ ಹಾಗೆ ವಿಂಧ್ಯ ಪರ್ವತ ಕಂಡುಬರುತ್ತದೆ. ಇದು 300 ಮೀ ಸಮೋನ್ನತಾ ರೇಖೆಯಿಂದ ಕೂಡಿದೆ. ಇಲ್ಲಿನ ಶಿಲಾರಚನೆ ಬೆಸಾಲ್ಟ್ ಶಿಲೆಗಳಿಂದ ಕೂಡಿ ಕೆಲವು ಜಲಪಾತಗಳ ಸೃಷ್ಟಿಗೆ ಕಾರಣವಾಗಿದೆ. ಈ ಶಿಲಾ ರಚನೆ ಹೊಷಂಗಾ ಬಾದ್‍ನ ನರ್ಮದಾ ನದಿಯ ತೀರದ ಇಳಿಜಾರು ಪ್ರದೇಶದಲ್ಲಿ ಗಟ್ಟಿಯಾದ ಮರಳು ಶಿಲೆಗಳಾಗಿ ಕಂಡುಬರುತ್ತದೆ. ಮಾನ್ಸೂನ್ ಮಾರುತ ವಿಂಧ್ಯಪರ್ವತ ಶ್ರೇಣಿಯ ವಾಯುಗುಣದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಮಳೆಯಾಗುತ್ತದೆ. ಮಾರ್ಚಿಯಿಂದ ಮೇ ತಿಂಗಳವರೆಗೆ ಬೇಸಗೆ. ಆಗ 330ಸೆಂ ನಿಂದ 440ಸೆಂ ಉಷ್ಣಾಂಶ ಕಂಡುಬರುತ್ತದೆ. ಮಳೆಗಾಲದಲ್ಲಿ ಗರಿಷ್ಠ ಉಷ್ಣಾಂಶ 300ಸೆಂ ಮತ್ತು ಕನಿಷ್ಠ ಉಷ್ಣಾಂಶ 190ಸೆಂ. ಚಳಿಗಾಲದಲ್ಲಿ ಶುಷ್ಕ ವಾಯುಗುಣವಿರುತ್ತದೆ.

	ಈ ಪ್ರದೇಶದಲ್ಲಿ ಕಾಡುಕೋಣ, ಚಿಗರೆ, ಮೊಲ, ಜಿಂಕೆ, ಚಿರತೆ, ಹಂದಿ ಇತ್ಯಾದಿ ಪ್ರಾಣಿಗಳಿವೆ. ವಿಂಧ್ಯಪರ್ವತ ಶ್ರೇಣಿಯಿರುವ ಮಧ್ಯಪ್ರದೇಶದಲ್ಲಿ 11 ರಾಷ್ಟ್ರೀಯ ಉದ್ಯಾನವನಗಳು, 32 ವನ್ಯಜೀವಿ ರಕ್ಷಣಾವಲಯಗಳು ಕಂಡುಬರುತ್ತವೆ. ಈ ಎಲ್ಲಾ ವಲಯಗಳಲ್ಲಿ ಸಸ್ಯ ಸಮೃದ್ಧಿಯಿದೆ. ಇಲ್ಲಿನ ಜನಸಂಖ್ಯೆಯಲ್ಲಿ 1/5 ಭಾಗ ಬಿಲ್ಲ, ಗೊಂಡ, ಕಮಾರ, ಕೋಲ, ಮಾರಿಯ ಬುಡಕಟ್ಟುಗಳಿಗೆ ಸೇರಿದವರು. ಇವರು ತಮ್ಮ ಸಂಪ್ರದಾಯ, ಧಾರ್ಮಿಕ ನಂಬಿಕೆ ಹಾಗೂ ಜನಪದ ಪರಂಪರೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಇವರಲ್ಲಿ ಗೊಂಡರು (2.5 ಮಿಲಿಯನ್) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

	ಗಂಗಾ, ಯಮುನಾ, ಚಂಬಾಲ್, ಬೇತ್ವ, ಕೆನ್, ತೊನ್ಸ್, ಸೊನ-ಈ ನದಿಗಳ ಮಡಿಲಾಗಿರುವ ವಿಂಧ್ಯಪರ್ವತಶ್ರೇಣಿಯನ್ನು 2ನೆಯ ಶತಮಾನದಲ್ಲೆ ಗ್ರೀಕ್ ಭೂಗೋಳಶಾಸ್ತ್ರಜ್ಞ ಟಾಲೆಮಿ ವಿಂಡಿಯಸ್ ಎಂದು ಗುರುತಿಸಿ ಇದು ಉತ್ತರ ಭಾರತ ಹಾಗೂ ಪರ್ಯಾಯ ದ್ವೀಪದಂತಿರುವ ದಕ್ಷಿಣಭಾರತಗಳ ನಡುವಿನ ಎಲ್ಲೆಯಂತಿದೆ ಎಂದಿದ್ದಾನೆ.	
	(ಎಚ್.ಎನ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ